Public Prime News

CLEAR VISION, TRUE MISSION

ಕಾರ್ಕಳದ,ಶಿರ್ಲಾಲುವಿನ ಹಳ್ಳಿಯ ಮಣ್ಣಿನಿಂದ ಪತ್ರಿಕೋದ್ಯಮದ ಶಿಖರದತ್ತ– ಬಿಲ್ಲವ ಸಮುದಾಯದ ಹೆಮ್ಮೆಯಾಗಿ ಅಥರ್ವ ರಂಜನ್ ಅವರ ಪಯಣ
local-achievers

ಕಾರ್ಕಳದ,ಶಿರ್ಲಾಲುವಿನ ಹಳ್ಳಿಯ ಮಣ್ಣಿನಿಂದ ಪತ್ರಿಕೋದ್ಯಮದ ಶಿಖರದತ್ತ– ಬಿಲ್ಲವ ಸಮುದಾಯದ ಹೆಮ್ಮೆಯಾಗಿ ಅಥರ್ವ ರಂಜನ್ ಅವರ ಪಯಣ

Public Prime News

Public Prime News

Reported by Public Prime News

ಕಾರ್ಕಳ/ಶಿರ್ಲಾಲು:
ಜೀವನದಲ್ಲಿ ಕೆಲವರ ಪಯಣವೇ ಒಂದು ಸ್ಫೂರ್ತಿಯ ಕಥೆಯಾಗಿರುತ್ತದೆ. ಅವಕಾಶಗಳು ಕೈ ಹಿಡಿದು ಮೇಲೆತ್ತಿದ ಕಥೆಯಲ್ಲ ಅದು ಸವಾಲುಗಳ ನಡುವೆಯೇ ತಮ್ಮ ದಾರಿಯನ್ನು ತಾವೇ ನಿರ್ಮಿಸಿಕೊಂಡ ಕಥೆ. ಹಳ್ಳಿಯ ಮಣ್ಣಿನಲ್ಲಿ ಬೆಳೆದು, ಬಡತನದ ಬದುಕಿನ ಸವಾಲುಗಳನ್ನು ಎದುರಿಸಿ, ಇಂದು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಯುವ ಪತ್ರಕರ್ತ ಅಥರ್ವ ರಂಜನ್ ಅವರ ಪಯಣವೂ ಅಂತಹದ್ದೇ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಅಕ್ಕೆರಬೆಟ್ಟು ಮನೆಯ ರಾಘು ಪೂಜಾರಿ ಮತ್ತು ಲಲಿತಾ ದಂಪತಿಗಳ ತೃತೀಯ ಪುತ್ರರಾದ ಅಥರ್ವ ರಂಜನ್, ಸರಳ ಹಳ್ಳಿಗಾಡಿನ ಬದುಕಿನಿಂದ ಬಂದವರು. 

ಸೌಲಭ್ಯಗಳಿಗಿಂತ ಸವಾಲುಗಳೇ ಹೆಚ್ಚಿದ್ದ ದಿನಗಳನ್ನು ಕಂಡವರು. ಆದರೆ ಬದುಕಿನ ಕಷ್ಟಗಳನ್ನು ತಮ್ಮ ಕನಸುಗಳಿಗೆ ಅಡ್ಡಿಯಾಗಲು ಬಿಡದೆ, ಪರಿಶ್ರಮ ಮತ್ತು ಛಲವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಮುಂದೆ ಸಾಗಿದವರು.

ಪತ್ರಿಕೋದ್ಯಮದ ಮೇಲಿನ ಆಸಕ್ತಿಯಿಂದ ಆರಂಭವಾದ ಅವರ ವೃತ್ತಿ ಪಯಣಕ್ಕೆ ಇಂದು ಸುಮಾರು ಒಂದು ದಶಕದ ಅನುಭವದ ಬಲವಿದೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ ರಾಷ್ಟ್ರೀಯ ಮಟ್ಟದ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸಿರುವ ಅನುಭವ ಅವರಿಗಿದೆ. 

ಪ್ರಸ್ತುತ ಬೆಂಗಳೂರಿನ ವಿಸ್ತಾರ ನ್ಯೂಸ್‌ನಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ,

ಸುದ್ದಿಗಿಂತ ಜನರ ಸಮಸ್ಯೆ ಧ್ವನಿಯಾಗಿರೋ ತುಳುನಾಡಿನ ಹೆಮ್ಮೆಯ ಪತ್ರಕರ್ತ:
ಅಥರ್ವ ರಂಜನ್ ಅವರ ಪತ್ರಿಕೋದ್ಯಮದ ಶೈಲಿ ಸ್ವಲ್ಪ ವಿಭಿನ್ನ. ಸಮಸ್ಯೆಯನ್ನು ಕ್ಯಾಮೆರಾದಲ್ಲಿ ತೋರಿಸಿ, ಸುದ್ದಿ ಪ್ರಸಾರ ಮಾಡಿ ಅಲ್ಲಿಗೆ ಮುಗಿಸುವುದು ಅವರ ಸ್ವಭಾವವಲ್ಲ. ಸಾರ್ವಜನಿಕ ಸಮಸ್ಯೆ, ಆಡಳಿತಾತ್ಮಕ ನಿರ್ಲಕ್ಷ್ಯ, ಭ್ರಷ್ಟಾಚಾರ ಅಥವಾ ಅಧಿಕಾರಿಗಳ ಲೋಪ ಕಂಡಾಗ ಅದರ ಹಿಂದಿರುವ ಸತ್ಯವನ್ನು ಹುಡುಕುವುದು ಅವರ ಕಾರ್ಯಶೈಲಿ.ನೇರ ಮಾತು, ನಿಖರ ಮಾಹಿತಿ ಮತ್ತು ಪ್ರಶ್ನಿಸುವ ಧೈರ್ಯ ಇವು ಅವರ ವರದಿಗಾರಿಕೆಯ ಪ್ರಮುಖ ಗುರುತುಗಳು. 

ಹಲವು ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ವರದಿಗಳ ಮೂಲಕ ಬೆಳಕಿಗೆ ತಂದಿರುವ ಅಥರ್ವ ರಂಜನ್, ಅಗತ್ಯವಿದ್ದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಪ್ರಶ್ನಿಸುತ್ತಾರೆ. ವಿಷಯ ಗಂಭೀರವಾಗಿದ್ದರೆ ಸಚಿವರ ಗಮನಕ್ಕೂ ತರುವ ಪ್ರಯತ್ನ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಪತ್ರಿಕೋದ್ಯಮ ಎಂದರೆ ಕೇವಲ “ಬ್ರೇಕಿಂಗ್ ನ್ಯೂಸ್” ಅಲ್ಲ; ಜನರ ಸಮಸ್ಯೆಗೆ ಪರಿಹಾರ ಸಿಗುವ ದಿಕ್ಕಿನಲ್ಲಿ ಪ್ರಯತ್ನಿಸುವ ಜವಾಬ್ದಾರಿ ಕೂಡ ಹೌದು ಅನ್ನೊದಕ್ಕೆ ಉದಾಹರಣೆಯಾಗಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ವಿರುದ್ಧ ನಿರ್ಭೀತಿಯಿಂದ ವರದಿ ಮಾಡುವ ಮೂಲಕ, ತಪ್ಪು ಮಾಡುವ ಕೆಲ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗುವಷ್ಟು ನೇರವಾದ ವರದಿಗಾರಿಕೆಯ ಶೈಲಿಯನ್ನು ಅವರು ರೂಪಿಸಿಕೊಂಡಿದ್ದಾರೆ.

ಸಮಾಜಮುಖಿ ಕಾರ್ಯದಲ್ಲೂ ತಮ್ಮದೇ ಹೆಜ್ಜೆ:
ಪತ್ರಿಕೋದ್ಯಮದ ಜೊತೆಗೆ ಸಮಾಜಮುಖಿ ಕಾರ್ಯದ ಅನುಭವವೂ ಅಥರ್ವ ರಂಜನ್ ಅವರ ಪಯಣಕ್ಕೆ ಮತ್ತೊಂದು ಆಯಾಮ ನೀಡಿದೆ. ಸುಮಾರು ಒಂದು ವರ್ಷದ ಕಾಲ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಅವರು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಅರಿಯುವ ಅವಕಾಶ ಪಡೆದಿದ್ದಾರೆ.

ವಿಶೇಷವಾಗಿ ಮೈಸೂರು ದಸರಾ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ನೀಡಿದ ಕೊಡುಗೆ, ಅವರ ವೃತ್ತಿಪರ ಮತ್ತು ಸಾಮಾಜಿಕ ಪಯಣದ ಪ್ರಮುಖ ಅಧ್ಯಾಯವಾಗಿದೆ.

ಹಳ್ಳಿಯ ಬೇರುಗಳನ್ನು ಮರೆಯದ ಪಯಣ:
ಇಂದು ಬೆಂಗಳೂರಿನ ಮಾಧ್ಯಮ ಲೋಕದಲ್ಲಿ ಹಿರಿಯ ಪತ್ರಕರ್ತನಾಗಿ ಗುರುತಿಸಿಕೊಂಡಿದ್ದರೂ, ಅಥರ್ವ ರಂಜನ್ ಅವರ ಕಥೆಯ ಆರಂಭ ಶಿರ್ಲಾಲುವಿನ ಹಳ್ಳಿಯ ಮಣ್ಣಿನಲ್ಲಿದೆ. ಬಡತನ, ಸವಾಲು ಮತ್ತು ಹೋರಾಟದ ನಡುವೆ ಆರಂಭವಾದ ಪಯಣವೇ ಇಂದು ಅವರಿಗೆ ಜನರ ನೋವು ಮತ್ತು ಸಮಸ್ಯೆಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವ ಮನಸ್ಸನ್ನು ನೀಡಿದೆ. ಬಹುಶಃ ಅದಕ್ಕಾಗಿಯೇ ಅವರ ಪತ್ರಿಕೋದ್ಯಮದಲ್ಲಿ ಸಾಮಾನ್ಯ ಜನರ ಸಮಸ್ಯೆಗಳಿಗೆ ವಿಶೇಷ ಸ್ಥಾನವಿದೆ.

ನಿಖರ ಮಾಹಿತಿ. ನೇರ ಮಾತು. ನಿಷ್ಪಕ್ಷಪಾತ ವರದಿ. ಜನಪರ ಕಾಳಜಿ.ಇವು ಕೇವಲ ಪದಗಳಲ್ಲ ,ಅಥರ್ವ ರಂಜನ್ ತಮ್ಮ ವೃತ್ತಿ ಬದುಕಿನಲ್ಲಿ ಅನುಸರಿಸುತ್ತಿರೋ ಮೌಲ್ಯಗಳು.

ಶಿರ್ಲಾಲುವಿನ ಹಳ್ಳಿಯ ಮಣ್ಣಿನಿಂದ ಹೊರಟ ಒಬ್ಬ ಯುವಕ, ಸವಾಲುಗಳನ್ನು ಮೆಟ್ಟಿ, ಪರಿಶ್ರಮದ ಮೂಲಕ ಇಂದು ರಾಜ್ಯದ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಗುರುತನ್ನು ಕಟ್ಟಿಕೊಂಡಿದ್ದಾರೆ..ಬಿಲ್ಲವ ಸಮುದಾಯದ ಯುವಕರಿಗೆ ಹೆಮ್ಮೆ ಮತ್ತು ಸ್ಫೂರ್ತಿಯ ಪಯಣವಾಗಿರುವ ಅಥರ್ವ ರಂಜನ್ ಅವರ ಕಥೆ ಇನ್ನೂ ಮುಗಿದಿಲ್ಲ…ಹಳ್ಳಿಯಿಂದ ಬಂದವರು… ಆದರೆ ಕನಸುಗಳಿಗೆ ಗಡಿ ಹಾಕದವರು.
ಸತ್ಯದ ಪರವಾಗಿ ನಿಲ್ಲುವ ಧೈರ್ಯದೊಂದಿಗೆ ಸಾಗುತ್ತಿರುವ ಪತ್ರಕರ್ತ — ಅಥರ್ವ ರಂಜನ್ ನಮ್ಮ ತುಳುನಾಡಿನ ಹೆಮ್ಮೆಯಾಗಿದ್ದಾರೆ...
Share this story