ಬೆಂಗಳೂರು:
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕರ್ನಾಟಕದ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.
ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ರಾಜ್ಯದ ಸುಮಾರು 90,000 ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡಲು ಸಿದ್ಧತೆ ನಡೆಸಿದೆ.
ನೋಂದಣಿ ಹೇಗೆ.?:
ಕರ್ನಾಟಕದ ಅಧಿಕೃತ ನಿವಾಸಿಗಳಾಗಿರುವ ಅರ್ಹ ವಿದ್ಯಾರ್ಥಿಗಳು 'ಸೇವಾ ಸಿಂಧು' ಪೋರ್ಟಲ್ ಮೂಲಕ ಈ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಅವಕಾಶ:
ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಗರಿಷ್ಠ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಯಾವೆಲ್ಲ ಪರೀಕ್ಷೆಗಳಿಗೆ ತರಬೇತಿ.?:
ಸಹಾಯಕ ಪ್ರಾಧ್ಯಾಪಕರು, ಪ್ರಥಮ ದರ್ಜೆ ಸಹಾಯಕರು (FDA), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO), ಗ್ರೂಪ್-C ಹುದ್ದೆಗಳು, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (PSI), ಗ್ರಾಮ ಆಡಳಿತ ಅಧಿಕಾರಿ (VAO), ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರ ಮಟ್ಟದ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ತರಬೇತಿಯ ವಿಶೇಷತೆಗಳು ಮತ್ತು ಪಠ್ಯಕ್ರಮ:
ದ್ವಿಭಾಷಾ ಪೋರ್ಟಲ್ ಹಾಗೂ ಆ್ಯಪ್:
ಆಯ್ಕೆಯಾಗುವ ತರಬೇತಿ ಸಂಸ್ಥೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಿಸಲಿದೆ.
ಸಂವಾದಾತ್ಮಕ ತರಗತಿಗಳು:
ಒಟ್ಟು 360 ಸಂವಾದಾತ್ಮಕ ಆನ್‌ಲೈನ್ ತರಬೇತಿ ಅವಧಿಗಳು ಇರಲಿದ್ದು, ಪ್ರತಿ ತರಗತಿಯು 90 ರಿಂದ 120 ನಿಮಿಷಗಳ ಕಾಲವಿರುತ್ತದೆ.
ಪ್ರತಿ ಪರೀಕ್ಷೆಯ ತರಬೇತಿಯು 90 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಒಳಗೊಂಡಿರುವ ವಿಷಯಗಳು:
ಭಾರತ ಹಾಗೂ ಕರ್ನಾಟಕದ ಇತಿಹಾಸ, ಭೂಗೋಳ, ರಾಜಕೀಯ ವ್ಯವಸ್ಥೆ, ಭಾರತೀಯ ಆರ್ಥಿಕತೆ, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ತಾರ್ಕಿಕ ಸಾಮರ್ಥ್ಯ, ಪ್ರಚಲಿತ ವಿದ್ಯಮಾನಗಳು ಹಾಗೂ ಸಾಮಾನ್ಯ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.
ಆರ್ಥಿಕ ಅಂದಾಜು ಮತ್ತು ಪಾರದರ್ಶಕತೆ:
ಒಬ್ಬ ವಿದ್ಯಾರ್ಥಿಯ ತರಬೇತಿಗೆ ಅಂದಾಜು ₹1,000 ವೆಚ್ಚವಾಗಲಿದ್ದು, 90 ಸಾವಿರ ವಿದ್ಯಾರ್ಥಿಗಳಿಗೆ ಒಟ್ಟು ₹9 ಕೋಟಿ ವೆಚ್ಚ ಅಂದಾಜಿಸಲಾಗಿದೆ.
ತರಬೇತಿ ಸಂಸ್ಥೆಗೆ ನಿಗದಿತ ಗುರಿ ಹಾಗೂ ವಿದ್ಯಾರ್ಥಿಗಳ ಹಾಜರಾತಿಯ ಆಧಾರದ ಮೇಲೆ ಮಾತ್ರ ಹಣ ಪಾವತಿಸುವ ವ್ಯವಸ್ಥೆ ಇರುವುದರಿಂದ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ.


