ಉಡುಪಿ:
ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಕಳೆಕಟ್ಟಲು ಸರ್ಕಾರ ಸಜ್ಜಾಗಿದೆ. ಸಮುದ್ರ ಮತ್ತು ನದಿಯ ನಡುವೆ ಪ್ರಕೃತಿಯ ಅಪುರ್ವ ಮಡಿಲಲ್ಲಿ ಹಾದುಹೋಗುವ ಪ್ರಸಿದ್ಧ ತ್ರಾಸಿ ಹಾಗೂ ಮರವಂತೆ ಬೀಚ್‌ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರ್ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಇಂದು ತ್ರಾಸಿ ಮರವಂತೆ ಬೀಚ್‌ಗೆ ಖುದ್ದು ಭೇಟಿ ನೀಡಿ, ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದ ಬಳಿಕ ಅವರು ಈ ಮಹತ್ವದ ಘೋಷಣೆ ಮಾಡಿದರು.
ಕೋಟಿ ಕೋಟಿ ವೆಚ್ಚದ ಯೋಜನೆ:
ಸುಮಾರು 9.95 ಕೋಟಿ ರೂ. ವೆಚ್ಚದಲ್ಲಿ ಕಳೆದ ಎರಡು ವರ್ಷಗಳಿಂದ ತ್ರಾಸಿ ಬೀಚ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಫುಡ್‌ಕೋರ್ಟ್, ಸೈಕಲ್ ಟ್ರ್ಯಾಕ್, ಮತ್ತು ಬಯಲು ರಂಗಮಂದಿರ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಇನ್ನು ಮುಂದೆ ಕಾಮಗಾರಿಗೆ ಹೆಚ್ಚಿನ ವೇಗ ನೀಡಿ ಶೀಘ್ರವೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಅತ್ಯಾಧುನಿಕ ಮೂಲಸೌಕರ್ಯಕ್ಕೆ ಒತ್ತು:
ಕರಾವಳಿಯ ಕಡಲ ತೀರಗಳಲ್ಲಿ ಕುಡಿಯುವ ನೀರು, ಸುಧಾರಿತ ಬೆಳಕಿನ ವ್ಯವಸ್ಥೆ, ಅತ್ಯಾಧುನಿಕ ಶೌಚಗೃಹಗಳು, ವಿಶಾಲವಾದ ವಾಹನ ನಿಲುಗಡೆ ಜಾಗ ಹಾಗೂ ಆಸನ ವ್ಯವಸ್ಥೆ ಕಲ್ಪಿಸುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ಸಿಗಲಿದೆ. ಇದು ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಕೈವಾಕ್ ನಿರ್ಮಾಣಕ್ಕೆ ಚಿಂತನೆ:
ಬೀಚ್‌ನಿಂದ ಹೋಟೆಲ್‌ಗೆ ಸುರಕ್ಷಿತವಾಗಿ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಯ ಮೇಲ್ಭಾಗದಲ್ಲಿ ಸ್ಕೈವಾಕ್ (Skywalk) ನಿರ್ಮಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು. ಸಾರ್ವಜನಿಕರ ಮತ್ತು ಪ್ರವಾಸಿಗರ ನೈಜ ಅಗತ್ಯಕ್ಕೆ ತಕ್ಕಂತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಲಾಗಿದೆ.
ಪ್ರವಾಸಿಗರ ಸುರಕ್ಷತೆಗೆ ಮುನ್ನೆಚ್ಚರಿಕೆ
ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನಲ್ಲಿ ಸುಮಾರು 1.5 ಕಿ.ಮೀ ಉದ್ದವಿರುವ ತ್ರಾಸಿ-ಮರವಂತೆ ಕಡಲತೀರದಲ್ಲಿ ತಡೆಬೇಲಿ ಇಲ್ಲದಿರುವುದರಿಂದ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಬೀಚ್‌ಗೆ ಇಳಿಯುತ್ತಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ನಿಗಾ ವಹಿಸಲು ಹಾಗೂ ಸ್ಥಳದಲ್ಲೇ ಅಗತ್ಯ ತರಬೇತಿ ಪಡೆದ ಜೀವರಕ್ಷಕರನ್ನು ನೇಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಧಾರ್ಮಿಕ ಮತ್ತು ಪ್ರವಾಸೋದ್ಯಮ ಸಮನ್ವಯ
ಉಡುಪಿ ಜಿಲ್ಲೆಯ ವಿಶ್ವವಿಖ್ಯಾತ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ.
ಧಾರ್ಮಿಕ ಪ್ರವಾಸೋದ್ಯಮದೊಂದಿಗೆ ಕಡಲ ತೀರದ ಪ್ರವಾಸೋದ್ಯಮವನ್ನು ಬೆಸೆಯಲು ಈ ಕ್ಷೇತ್ರಗಳಿಗೆ ಪೂರಕವಾದ ವ್ಯವಸ್ಥಿತ ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.
ಈ ಪರಿಶೀಲನಾ ಸಭೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಮ್.ಎ. ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್‌ಪ್ರಸಾತ್ ಮನೋಹರ್, ಎಡಿಸಿ ಅಬೀದ್ ಗಧ್ಯಾಳ, ಜಿಲ್ಲಾ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಮ್ ಸೇರಿದಂತೆ ಪ್ರಮುಖ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.


