ಬೆಂಗಳೂರು:
2027ರ ಮಾರ್ಚ್–ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC) ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026–27ನೇ ಸಾಲಿನ ವಾರ್ಷಿಕ ಪರೀಕ್ಷೆಗಳಿಗೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ನವೆಂಬರ್ 11 ನೋಂದಣಿಗೆ ಕೊನೆಯ ದಿನವಾಗಿದೆ.
ಹೊಸ ಅಭ್ಯರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮಂಡಳಿಯು ಅಗತ್ಯ ಮಾರ್ಗಸೂಚಿ ಮತ್ತು ಕೈಪಿಡಿಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವಾಗಿದೆ.
ಶಾಲೆ-ಕಾಲೇಜುಗಳ ಮೂಲಕವೇ ನೋಂದಣಿ ಪ್ರಕ್ರಿಯೆ
ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ಕಾರ್ಯವನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರು ನಿರ್ವಹಿಸಬೇಕು. ಇದಕ್ಕಾಗಿ ಅವರು ತಮ್ಮ ಅಧಿಕೃತ ಶಾಲೆ ಅಥವಾ ಕಾಲೇಜಿನ ಲಾಗಿನ್ ಬಳಸಿ ಮಂಡಳಿಯ ಸೂಚನೆಗಳ ಪ್ರಕಾರ ಅಗತ್ಯ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ.
ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮಂಡಳಿ ಬಿಡುಗಡೆ ಮಾಡಿರುವ ಮಾರ್ಗಸೂಚಿ ಹಾಗೂ ಕೈಪಿಡಿಗಳನ್ನು ಪರಿಶೀಲಿಸಿ, ಅದರಂತೆ ಕಾರ್ಯನಿರ್ವಹಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿಗೆ ವಿಶೇಷ ಸೂಚನೆ
ಪರೀಕ್ಷಾ ನೋಂದಣಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ಮಂಡಳಿಯು ಪ್ರಮುಖ ಸೂಚನೆ ನೀಡಿದೆ. ಅಭ್ಯರ್ಥಿಗಳ ಬಹುತೇಕ ವಿವರಗಳನ್ನು ಸ್ಯಾಟ್ಸ್ (SATS) ತಂತ್ರಾಂಶದಿಂದಲೇ ಪಡೆಯಲಾಗುತ್ತದೆ.
ವಿದ್ಯಾರ್ಥಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮದಿನಾಂಕ, ಪ್ರವರ್ಗ, ಧರ್ಮ, ಲಿಂಗ ಹಾಗೂ ಬೋಧನಾ ಮಾಧ್ಯಮದಂತಹ ವಿವರಗಳನ್ನು ನೋಂದಣಿ ಪ್ರಕ್ರಿಯೆಯಲ್ಲಿಯೇ ನೇರವಾಗಿ ಬದಲಾಯಿಸಲು ಅವಕಾಶವಿರುವುದಿಲ್ಲ.


