Public Prime News

CLEAR VISION, TRUE MISSION

ಅಂಗವೈಕಲ್ಯದಿಂದ ಬಳಲುತ್ತಿದ್ದ 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣು..!
crime

ಅಂಗವೈಕಲ್ಯದಿಂದ ಬಳಲುತ್ತಿದ್ದ 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣು..!

Public Prime News

Public Prime News

Reported by Public Prime News

ಕುಂದಾಪುರ:
ಅಂಗವೈಕಲ್ಯದಿಂದ ಬಳಲುತ್ತಿದ್ದ 14 ವರ್ಷದ ಮಗಳನ್ನು ಕತ್ತಿಯಿಂದ ಹತ್ಯೆಗೈದ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನಾಡಿಯಲ್ಲಿ ಅಕ್ಟೋಬರ್ 25ರ ಭಾನುವಾರ ಬೆಳಗ್ಗೆ ನಡೆದಿದೆ.

ಶಾನಾಡಿ ನಿವಾಸಿ ಸುಧಾಕರ ಅವರ ಪುತ್ರಿ ಸುಪ್ರತಿ (14) ಹಾಗೂ ಪತ್ನಿ ನೇತ್ರಾವತಿ (40) ಮೃತಪಟ್ಟವರು. ಬೆಳಗ್ಗೆ ಸುಮಾರು 8.30ರ ವೇಳೆಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸುಪ್ರತಿ ಬಾಲ್ಯದಿಂದಲೇ ಅಂಗವೈಕಲ್ಯದಿಂದ ಬಳಲುತ್ತಿದ್ದು, ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಮಗಳಿಗೆ ಚಿಕಿತ್ಸೆ ಕೊಡಿಸಲು ಕುಟುಂಬದವರು ಹಲವು ಪ್ರಯತ್ನಗಳನ್ನು ನಡೆಸಿದ್ದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಮಗಳ ಆರೈಕೆಯ ಜವಾಬ್ದಾರಿಯನ್ನು ತಾಯಿ ನೇತ್ರಾವತಿಯವರೇ ನಿರ್ವಹಿಸುತ್ತಿದ್ದರು. ಮಗಳ ಆರೋಗ್ಯ ಸ್ಥಿತಿಯಿಂದ ಅವರು ತೀವ್ರವಾಗಿ ಮನನೊಂದಿದ್ದರು ಎಂದು ಪತಿ ಸುಧಾಕರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

ಘಟನೆ ತಿಳಿಯುತ್ತಿದ್ದಂತೆ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್., ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ ಹಾಗೂ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪರಾಧ ವಿಭಾಗದ ಅಧಿಕಾರಿಗಳು ಹಾಗೂ ಅಪರಾಧ ಸ್ಥಳ ಪರಿಶೀಲನಾ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Share this story