ಬೆಂಗಳೂರು:
2027ನೇ ಸಾಲಿನ ಎಸ್ಎಸ್ಎಲ್‌ಸಿ (SSLC) ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ತಮ್ಮ 11 ಅಂಕಿಗಳ PEN ಸಂಖ್ಯೆ ಹಾಗೂ 12 ಅಂಕಿಗಳ APAAR ಐಡಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸೂಚಿಸಿದೆ.
ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಲಾಕರ್ ಮೂಲಕ ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ನೋಂದಣಿ ಸಂದರ್ಭದಲ್ಲಿ ಅಗತ್ಯ ಸಂಖ್ಯೆಗಳ ದಾಖಲಾತಿಗೆ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿಗಳು ಗಮನಹರಿಸಬೇಕು.
ಡಿಜಿಟಲ್ ಅಂಕಪಟ್ಟಿ ಪಡೆಯಲು ಅನುಕೂಲ
ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ಸುಲಭವಾಗಿ ಪಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಪರೀಕ್ಷೆಗೆ ಮೊದಲ ಬಾರಿಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳು PEN ಮತ್ತು APAAR ವಿವರಗಳನ್ನು ಸರಿಯಾಗಿ ದಾಖಲಿಸುವುದು ಅಗತ್ಯವಾಗಿದೆ.
APAAR ಐಡಿ ನಮೂದಿಸದ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಪಡೆಯುವಲ್ಲಿ ತೊಂದರೆಯಾಗುವ ಸಾಧ್ಯತೆಯಿದ್ದು, ಅಂತಹವರಿಗೆ ಭೌತಿಕ ಅಂಕಪಟ್ಟಿ ನೀಡುವ ಸಾಧ್ಯತೆಯಿದೆ ಎಂದು ಮಂಡಳಿಯ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ತಿಳಿಸಿದ್ದಾರೆ.
PEN ಮತ್ತು APAAR ಐಡಿ ಎಂದರೇನು.?
PEN (Permanent Education Number):
ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳನ್ನು ಗುರುತಿಸಲು ಬಳಸುವ ಶಾಶ್ವತ ಶಿಕ್ಷಣ ಸಂಖ್ಯೆಯಾಗಿದೆ. ಶಾಲಾ ದಾಖಲಾತಿ, ಶೈಕ್ಷಣಿಕ ಮಾಹಿತಿ ನಿರ್ವಹಣೆ ಹಾಗೂ ಶಾಲೆ ಬದಲಾಯಿಸಿದಾಗ ಹಿಂದಿನ ದಾಖಲೆಗಳನ್ನು ಗುರುತಿಸಲು ಇದು ಸಹಕಾರಿ.
APAAR (Automated Permanent Academic Account Registry): ‘
ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಗುರುತಿನ ಚೀಟಿ’ ಪರಿಕಲ್ಪನೆಯಡಿ ರೂಪಿಸಲಾದ ಗುರುತಿನ ವ್ಯವಸ್ಥೆ. ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಡಿಜಿಲಾಕರ್ ಮೂಲಕ ಪಡೆಯಲು ಇದು ನೆರವಾಗುತ್ತದೆ.
ಹೀಗಾಗಿ, 2027ರ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ PEN ಮತ್ತು APAAR ಸಂಖ್ಯೆಗಳ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು, ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ.


