Public Prime News

CLEAR VISION, TRUE MISSION

ಮೆಟಾ ಸ್ಮಾರ್ಟ್ ಗ್ಲಾಸ್ ಬಳಸಿ ನನ್ನ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಯತ್ನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ..!
politics

ಮೆಟಾ ಸ್ಮಾರ್ಟ್ ಗ್ಲಾಸ್ ಬಳಸಿ ನನ್ನ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಯತ್ನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ..!

Public Prime News

Public Prime News

Reported by Public Prime News

ಬೆಂಗಳೂರು: 
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಉದ್ಯಮಿಯೊಬ್ಬರು ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಬಳಸಿ ತಮ್ಮ ವಿರುದ್ಧ ರಹಸ್ಯವಾಗಿ ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಈ ಪ್ರಯತ್ನದಲ್ಲಿ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನೂ ಗುರಿಯಾಗಿಸಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಉದ್ಯಮಿಯ ವರ್ತನೆಯಿಂದ ಅನುಮಾನ
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಧಿಕಾರಿಗಳ ಮೂಲಕ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿದ್ದ ಉದ್ಯಮಿಯೊಬ್ಬರು ತಮ್ಮನ್ನು ಭೇಟಿಯಾಗಲು ಬಂದಿದ್ದರು ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಉದ್ಯಮ ಮತ್ತು ಕಂಪನಿಯ ವ್ಯವಹಾರಗಳ ಕುರಿತು ಚರ್ಚೆ ನಡೆಸಿದ ಆ ವ್ಯಕ್ತಿ, ಬಳಿಕ ಮಾತುಕತೆಯನ್ನು ರಾಜಕೀಯದತ್ತ ತಿರುಗಿಸಿದ್ದರು.

ಬೂತ್ ಮಟ್ಟದ ರಾಜಕೀಯ ತಂತ್ರಗಾರಿಕೆ, ಚುನಾವಣಾ ಸಮೀಕ್ಷೆ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಆ ವ್ಯಕ್ತಿ ಹೆಚ್ಚು ಆಸಕ್ತಿ ತೋರಿದ್ದರಿಂದ ಅನುಮಾನ ಮೂಡಿತು ಎಂದು ಶಿವಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮಿಯ ಹಿನ್ನೆಲೆ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

ಡಿ.ಕೆ.ಶಿ. ಮತ್ತು ಕೇರಳ ಸಿಎಂ ಭೇಟಿಯ ವೇಳೆ ಮಾತ್ರ ಸ್ಮಾರ್ಟ್ ಗ್ಲಾಸ್.?
ಸಂಬಂಧಪಟ್ಟ ವ್ಯಕ್ತಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿದಾಗ, ಅವರು ತಮ್ಮನ್ನು ಹಾಗೂ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾತ್ರ ರೆಕಾರ್ಡಿಂಗ್ ಸಾಮರ್ಥ್ಯವಿರುವ ಮೆಟಾ ಸ್ಮಾರ್ಟ್ ಗ್ಲಾಸ್ ಧರಿಸಿದ್ದರು ಎಂದು ತಿಳಿದುಬಂದಿದೆ ಎಂಬುದು ಶಿವಕುಮಾರ್ ಅವರ ಆರೋಪ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾದಾಗ ಆ ವ್ಯಕ್ತಿ ಸ್ಮಾರ್ಟ್ ಗ್ಲಾಸ್ ಧರಿಸಿರಲಿಲ್ಲ ಎಂದು ಮಾಹಿತಿ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆ ತಮ್ಮ ವಿರುದ್ಧ ರಹಸ್ಯವಾಗಿ ಮಾಹಿತಿ ಅಥವಾ ಸಂಭಾಷಣೆಗಳನ್ನು ದಾಖಲಿಸುವ ಪ್ರಯತ್ನ ನಡೆದಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಆದರೆ, ಸಂಬಂಧಪಟ್ಟ ಉದ್ಯಮಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಅಲ್ಲದೆ, ರಹಸ್ಯವಾಗಿ ರೆಕಾರ್ಡಿಂಗ್ ನಡೆದಿರುವುದನ್ನು ದೃಢಪಡಿಸುವ ಸಾಕ್ಷ್ಯಗಳನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.

ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಎಚ್ಚರಿಕೆ
ತಮ್ಮನ್ನು ಹಾಗೂ ಇತರ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸುವ ಪ್ರಯತ್ನಗಳ ಕುರಿತು ಮಾಹಿತಿ ಲಭಿಸಿರುವುದಾಗಿ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾಗಿ ತಿಳಿಸಿದ್ದಾರೆ.

ವೈಯಕ್ತಿಕ ಸಹಾಯಕರು, ದೂರವಾಣಿ ಕರೆಗಳು ಅಥವಾ ಭೇಟಿಗಳ ಮೂಲಕ ಯಾರಾದರೂ ಬಲೆಗೆ ಬೀಳಿಸುವ ಪ್ರಯತ್ನ ನಡೆಸಬಹುದು ಎಂಬ ಎಚ್ಚರಿಕೆಯನ್ನು ಸಚಿವರಿಗೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಸೂಕ್ತ ಸಮಯದಲ್ಲಿ ಮಾಹಿತಿ ಬಹಿರಂಗ
ತಮ್ಮ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಪ್ರಯತ್ನದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಎಲ್ಲ ಮಾಹಿತಿಯನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸೂಕ್ತ ಸಮಯ ಬಂದಾಗ ಹೆಚ್ಚಿನ ವಿವರಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಆರೋಪಿತ ಸ್ಟಿಂಗ್ ಆಪರೇಷನ್ ವಿಡಿಯೋಗಳ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ.

Share this story