ಕಲಬುರಗಿ:
ರಾಜ್ಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಕೃಷ್ಣಾ ಸಮೃದ್ಧಿ (KBS) ಬ್ಯಾಂಕಿನಲ್ಲಿ ಬರೋಬ್ಬರಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣವನ್ನು ಅಡವಿಟ್ಟು, ಲಕ್ಷಾಂತರ ರೂಪಾಯಿ ಸಾಲ ಪಡೆದಿರುವ ಕರಾಳ ಸತ್ಯ ವಾರ್ಷಿಕ ಆಡಿಟ್ ವೇಳೆ ಹೊರಬಿದ್ದಿದೆ.
ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಲೆಕ್ಕಪರಿಶೋಧನೆ ವೇಳೆ ಈ ಬೃಹತ್ ಗೋಲ್‌ಮಾಲ್ ಬಯಲಾಗಿದ್ದು, ನಕಲಿ ಚಿನ್ನವಿಟ್ಟು ಸುಮಾರು 76 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಲೂಟಿ ಮಾಡಿರುವುದು ಗೊತ್ತಾಗಿದೆ. ಈ ಅಕ್ರಮದ ಕುರಿತು ಬ್ಯಾಂಕ್ ಪ್ರಸ್ತುತ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಬ್ಯಾಂಕಿನ ಹಳೆ ಮ್ಯಾನೇಜರ್ ಹಾಗೂ ಚಿನ್ನಾಭರಣ ಪರಿಶೀಲನೆ ಮಾಡುತ್ತಿದ್ದ ಅಕ್ಕಸಾಲಿಗನ ವಿರುದ್ಧ ದೂರು ದಾಖಲಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ನೇರ ಶಾಮೀಲಾತಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವುದು ಅಸಾಧ್ಯವಾಗಿದ್ದು, ಈ ವಂಚನೆ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಗ್ರಾಹಕರಲ್ಲಿ ತೀವ್ರ ಆತಂಕ ಹಾಗೂ ಸಾರ್ವಜನಿಕ ಆಕ್ರೋಶ
ಬ್ಯಾಂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನ ಪತ್ತೆಯಾಗಿರುವುದು ಪ್ರಾಮಾಣಿಕ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ತಾವು ಅಸಲಿ ಚಿನ್ನವಿಟ್ಟು ಸಾಲ ಪಡೆದ ಗ್ರಾಹಕರು ತಮ್ಮ ಒಡವೆಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಒಳಹೊಕ್ಕು ಇಂಥ ಕೃತ್ಯ ಎಸಗಿರುವ ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
ಪ್ರಸ್ತುತ ಮ್ಯಾನೇಜರ್ ಮೇಲೂ ಗಂಭೀರ ಆರೋಪ.!
ಮತ್ತೊಂದೆಡೆ, ಈ ಕುರಿತು ದೂರು ನೀಡಿರುವ ಪ್ರಸ್ತುತ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರ ಮೇಲೆಯೂ ಗಂಭೀರ ಆರೋಪಗಳು ಕೇಳಿಬಂದಿವೆ. ಅವರು ಹಿಂದೆ ಕಮಲಾಪುರ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ 84 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದ್ದು, ಪೊಲೀಸರು ಈ ನಂಟಿನ ಕುರಿತು ಕೂಡ ಆಳವಾದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಸಮಗ್ರ ತನಿಖೆಯ ಬಳಿಕವಷ್ಟೇ ಈ ಹಗರಣದ ಅಸಲಿ ಸತ್ಯ ಹೊರಬರಬೇಕಿದೆ.


