ಮಂಗಳೂರು:
ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಕುಖ್ಯಾತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ (SIT) ನೂತನ ಕಚೇರಿಯನ್ನು ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸಜ್ಜುಗೊಳಿಸಲಾಗಿದೆ.
2012ರ ಅಕ್ಟೋಬರ್ 9ರಂದು ನಡೆದಿದ್ದ ಈ ಬಹುಚರ್ಚಿತ ಪ್ರಕರಣದ ತನಿಖೆಯನ್ನು ಹೊಸ ದೃಷ್ಟಿಕೋನದಿಂದ ಮುನ್ನಡೆಸಲು ಎಸ್‌ಐಟಿ ಅಧಿಕಾರಿಗಳ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿದೆ.
ಮೊದಲ ಹಂತದ ಉನ್ನತ ಮಟ್ಟದ ತನಿಖಾ ಸಭೆ:
ಮಂಗಳೂರಿನ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಎಸ್‌ಐಟಿ ತನಿಖಾ ಕಚೇರಿಯಲ್ಲಿ ಪ್ರಾಥಮಿಕ ಸಭೆ ಜರುಗಿತು.
ಎಸ್‌ಐಟಿ ಮುಖ್ಯಸ್ಥರಾದ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಬಳಗವು ಮಂಗಳೂರಿಗೆ ಆಗಮಿಸಿದ್ದು, ಮೊದಲ ಹಂತದ ಪ್ರಮುಖ ತನಿಖಾ ಸಭೆಯನ್ನು ನಡೆಸಿದೆ.
ಈ ಸಭೆಯಲ್ಲಿ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್ ಹಾಗೂ ಲೋಕೇಶ್ ಬಸಪ್ಪ ಜಗಲಾಸರ್ ಸೇರಿದಂತೆ ಮಂಗಳೂರು ಹಾಗೂ ರಾಜ್ಯದ ವಿವಿಧಡೆಯ ಒಟ್ಟು 16 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಮುಂದಿನ ತನಿಖಾ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರಂಭವಾಗಿರುವ ಈ ಮರುತನಿಖೆಯು ನ್ಯಾಯಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿರುವ ಸೌಜನ್ಯ ಕುಟುಂಬ ಹಾಗೂ ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.


