ನವದೆಹಲಿ:
ಪಿಂಚಣಿ ಪಡೆಯುವವರು ವಾರ್ಷಿಕ ಜೀವನ ಪ್ರಮಾಣ ಪತ್ರ (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ. 2026ನೇ ಸಾಲಿನ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಗಡುವಿನೊಳಗೆ ಸಲ್ಲಿಸದಿದ್ದರೆ ಪಿಂಚಣಿ ಪಾವತಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಅಕ್ಟೋಬರ್ 1ರಿಂದಲೇ ಪ್ರಮಾಣ ಪತ್ರ ಸಲ್ಲಿಸಬಹುದು. ಇತರ ಪಿಂಚಣಿದಾರರಿಗೆ ನವೆಂಬರ್ 1ರಿಂದ 30ರವರೆಗೆ ಅವಕಾಶವಿದೆ.
ಪಿಂಚಣಿದಾರರು ಜೀವನ್ ಪ್ರಮಾಣ್ ಮತ್ತು ಆಧಾರ್ ಫೇಸ್ ಆರ್‌ಡಿ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಮುಖ ಚಹರೆ ದೃಢೀಕರಣದ ಮೂಲಕ ಡಿಜಿಟಲ್ ಪ್ರಮಾಣ ಪತ್ರ ಸಲ್ಲಿಸಬಹುದು. ಮೊಬೈಲ್ ಬಳಕೆ ಸಾಧ್ಯವಾಗದವರು ಬ್ಯಾಂಕ್ ಶಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ನೆರವು ಪಡೆಯಬಹುದು. ಅಶಕ್ತ ಪಿಂಚಣಿದಾರರು ಅಂಚೆ ಇಲಾಖೆಯ ಮನೆಬಾಗಿಲಿನ ಸೇವೆಯ ಲಭ್ಯತೆಯನ್ನೂ ವಿಚಾರಿಸಬಹುದು.
ಹೀಗಾಗಿ, ಪಿಂಚಣಿದಾರರು ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲೆಗಳೊಂದಿಗೆ ಜೀವನ ಪ್ರಮಾಣ ಪತ್ರ ಸಲ್ಲಿಸಿ, ಪಿಂಚಣಿ ಪಾವತಿಯಲ್ಲಿ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.


