Public Prime News

CLEAR VISION, TRUE MISSION

ಉಡುಪಿಗೆ ಸಂಪೂರ್ಣ ಸಾಕ್ಷರತಾ ಜಿಲ್ಲೆಯ ಹೆಗ್ಗಳಿಕೆ: ಶೀಘ್ರದಲ್ಲೇ ಅಧಿಕೃತ ಘೋಷಣೆ
local-news

ಉಡುಪಿಗೆ ಸಂಪೂರ್ಣ ಸಾಕ್ಷರತಾ ಜಿಲ್ಲೆಯ ಹೆಗ್ಗಳಿಕೆ: ಶೀಘ್ರದಲ್ಲೇ ಅಧಿಕೃತ ಘೋಷಣೆ

Public Prime News

Public Prime News

Reported by Public Prime News

ಉಡುಪಿ: 
ಕರ್ನಾಟಕದ ಉಡುಪಿ ಜಿಲ್ಲೆಗೆ ಮತ್ತೊಂದು ಹೆಗ್ಗಳಿಕೆ ಲಭಿಸಿದೆ. ರಾಜ್ಯ ಸರ್ಕಾರವು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸಲು ಆದೇಶ ಹೊರಡಿಸಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಮಟ್ಟದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಸಾಕ್ಷರತಾ ಮಾನದಂಡಗಳ ಪ್ರಕಾರ, ಜಿಲ್ಲೆಯಲ್ಲಿ ಶೇ.95ಕ್ಕಿಂತ ಹೆಚ್ಚು ಸಾಕ್ಷರತೆ ಸಾಧಿಸಿರುವುದರಿಂದ ನಿಯಮಾನುಸಾರ ಉಡುಪಿಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂದು ಪರಿಗಣಿಸಲು ಸರ್ಕಾರ ಅನುಮೋದನೆ ನೀಡಿದೆ.

ಜಿಲ್ಲಾ ಪಂಚಾಯತ್‌ನಿಂದ ಪ್ರಸ್ತಾವನೆ
ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸುವಂತೆ ಜಿಲ್ಲಾ ಪಂಚಾಯತ್ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ, ಅಗತ್ಯ ಮಾನದಂಡಗಳು ಮತ್ತು ಷರತ್ತುಗಳ ಆಧಾರದಲ್ಲಿ ಆದೇಶ ಹೊರಡಿಸಿದೆ.

ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳು, 7 ತಾಲೂಕು ಪಂಚಾಯತ್‌ಗಳು ಹಾಗೂ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದು ಈ ಪ್ರಕ್ರಿಯೆಯಲ್ಲಿ ಮಹತ್ವ ಪಡೆದಿದೆ.

ಅಧಿಕೃತ ಘೋಷಣೆಗೆ ಸರ್ಕಾರದ ಷರತ್ತುಗಳೇನು.?
ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಿಸುವ ಮೊದಲು ಕೆಲವು ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ.

ಸಾಕ್ಷರತೆ ಪರಿಶೀಲನೆ: 
2011ರ ಜನಗಣತಿಯ ಸಾಕ್ಷರತಾ ಅಂಕಿ-ಅಂಶಗಳು ಹಾಗೂ ನಂತರದ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿಯ ದತ್ತಾಂಶಗಳನ್ನು ಪರಿಶೀಲಿಸಿ, ಸಾಕ್ಷರತೆಯ ಪ್ರಮಾಣ ಶೇ.95ಕ್ಕಿಂತ ಹೆಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಘೋಷಣೆಯ ದಿನಾಂಕ ನಿಗದಿ: 
ಜಿಲ್ಲೆಯ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಸ್ವಾತಂತ್ರ್ಯ ದಿನಾಚರಣೆ ಅಥವಾ ಕನ್ನಡ ರಾಜ್ಯೋತ್ಸವದಂತಹ ಪ್ರಮುಖ ದಿನದಂದು ಘೋಷಣೆ ಮಾಡಲು ದಿನಾಂಕ ನಿಗದಿಪಡಿಸಬೇಕು.

ಅಧಿಕೃತ ಕಾರ್ಯಕ್ರಮ: 
ಜನಪ್ರತಿನಿಧಿಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸಬೇಕು.

ದಾಖಲೀಕರಣ ಮತ್ತು ಪ್ರಚಾರ: 
ಇತರ ಜಿಲ್ಲೆಗಳಿಗೆ ಮಾದರಿಯಾಗುವಂತೆ ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಘೋಷಿಸುವ ಪ್ರಕ್ರಿಯೆಯನ್ನು ದಾಖಲಿಸಿ, ಪ್ರಚಾರ ನೀಡಬೇಕು.

ಸಾಕ್ಷರತಾ ಅಭಿಯಾನ ಮುಂದುವರಿಕೆ: 
ಘೋಷಣೆಯ ನಂತರವೂ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು, ನವಸಾಕ್ಷರರಿಗೆ ನಿರಂತರ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವುದು ಹಾಗೂ ವಲಸೆ ಬರುವ ಅನಕ್ಷರಸ್ಥರಿಗೆ ಸಾಕ್ಷರತೆ ಕಲಿಸುವ ಕಾರ್ಯಕ್ರಮಗಳನ್ನು ಮುಂದುವರಿಸಬೇಕು.

ನ.1ರ ಕನ್ನಡ ರಾಜ್ಯೋತ್ಸವದತ್ತ ಎಲ್ಲರ ಗಮನ
ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ 1ರಂದು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಈ ಮೂಲಕ ಸಾಕ್ಷರತೆ ಕ್ಷೇತ್ರದಲ್ಲಿ ಜಿಲ್ಲೆಯ ಸಾಧನೆಗೆ ಮತ್ತೊಂದು ಮನ್ನಣೆ ದೊರೆಯುವ ನಿರೀಕ್ಷೆಯಿದೆ.
Share this story