ದಿಸ್ಪುರ್:
ಸಾಮಾನ್ಯವಾಗಿ ಅರಣ್ಯದಲ್ಲಿ ಬೃಹತ್ ಮರಗಳನ್ನು ಎಳೆಯಲು ಅಥವಾ ದೇವಸ್ಥಾನಗಳ ಉತ್ಸವಗಳಲ್ಲಿ ಆನೆಗಳನ್ನು ನೋಡಿರುತ್ತೇವೆ.
ಆದರೆ, ಟ್ರ್ಯಾಕ್ಟರ್ ಅಥವಾ ಎತ್ತುಗಳ ಬದಲು ದೈತ್ಯ ಆನೆಯೊಂದು ಗದ್ದೆಯಲ್ಲಿ ನೇಗಿಲು ಹಿಡಿದು ಭೂಮಿ ಉಳುಮೆ ಮಾಡುತ್ತಿರುವ ಅಪರೂಪದ ಹಾಗೂ ಆಶ್ಚರ್ಯಕರ ಘಟನೆಯೊಂದು ಅಸ್ಸಾಂನಲ್ಲಿ ಸಂಭವಿಸಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಅಸ್ಸಾಂನ ನುಮಾಲಿಗಢ ಸಮೀಪದ ಮುರ್ಫುಲಾನಿ ಗ್ರಾಮದಲ್ಲಿ ಈ ವಿಸ್ಮಯಕಾರಿ ದೃಶ್ಯ ಕಂಡುಬಂದಿದೆ. ಸ್ಥಳೀಯ ನಿವಾಸಿ ಅತುಲ್ ಕರ್ಮಾಕರ್ ಅವರಿಗೆ ಸೇರಿದ 'ಮಾಣಿಕ್' ಎಂಬ ಹೆಸರಿನ ಸಾಕಾನೆ ಈಗ ತನ್ನ ಯಜಮಾನನ ಜಮೀನಿನಲ್ಲಿ ನಿರಾತಂಕವಾಗಿ ಕೃಷಿ ಕೆಲಸ ಮಾಡುತ್ತಿದೆ.
ಯಂತ್ರಗಳ ಕಾಲದಲ್ಲಿ ಆನೆಯ ಕರಾಮತ್ತು
ಮಾಣಿಕ್ ಆನೆಯು ತನ್ನ ಮಾವುತನ ಸೂಚನೆಯಂತೆ ನಿಧಾನವಾಗಿ ಹಾಗೂ ತಾಳ್ಮೆಯಿಂದ ಹೆಜ್ಜೆ ಇಡುತ್ತಾ, ಗದ್ದೆಯ ಮಣ್ಣನ್ನು ಹದಗೊಳಿಸುತ್ತಿರುವ ದೃಶ್ಯವನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ರೈತರು ಕೃಷಿಗಾಗಿ ಅತ್ಯಾಧುನಿಕ ಟ್ರ್ಯಾಕ್ಟರ್ ಹಾಗೂ ಯಂತ್ರೋಪಕರಣಗಳನ್ನು ಬಳಸುತ್ತಿರುವಾಗ, ಸಾಂಪ್ರದಾಯಿಕ ನೇಗಿಲಿಗೆ ಆನೆಯನ್ನು ಬಳಸಿ ಉಳುಮೆ ಮಾಡುತ್ತಿರುವುದು ಸ್ಥಳೀಯವಾಗಿ ಮತ್ತು ಡಿಜಿಟಲ್ ಲೋಕದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.


