Public Prime News

CLEAR VISION, TRUE MISSION

33 ವರ್ಷಗಳ ನಂತರ ಗುರು-ಶಿಷ್ಯರ ಅಪರೂಪದ ಸಮಾಗಮ: ಸ್ವಾಮಿ ಚಿನ್ಮಯಾನಂದರ 'AI ಹೊಲೊಗ್ರಾಮ್' ಜೊತೆ ಪ್ರಧಾನಿ ಮೋದಿ ಭಾವುಕ ಸಂವಾದ..!
national-news

33 ವರ್ಷಗಳ ನಂತರ ಗುರು-ಶಿಷ್ಯರ ಅಪರೂಪದ ಸಮಾಗಮ: ಸ್ವಾಮಿ ಚಿನ್ಮಯಾನಂದರ 'AI ಹೊಲೊಗ್ರಾಮ್' ಜೊತೆ ಪ್ರಧಾನಿ ಮೋದಿ ಭಾವುಕ ಸಂವಾದ..!

Public Prime News

Public Prime News

Reported by Public Prime News

ನವದೆಹಲಿ: 

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. 


ಸುಮಾರು 33 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದ ಪ್ರಸಿದ್ಧ ಆಧ್ಯಾತ್ಮಿಕ ಗುರು ಸ್ವಾಮಿ ಚಿನ್ಮಯಾನಂದ ಅವರ 'ಹೊಲೊಗ್ರಾಮ್' ರೂಪದೊಂದಿಗೆ ಪ್ರಧಾನಿ ಮೋದಿ ಮುಖಾಮುಖಿ ಸಂವಾದ ನಡೆಸಿದರು.


ಆಧುನಿಕ ಕೃತಕ ಬುದ್ಧಿಮತ್ತೆ (AI) ಹಾಗೂ ಹೊಲೊಗ್ರಾಮ್ ತಂತ್ರಜ್ಞಾನದ ನೆರವಿನಿಂದ ಸ್ವಾಮಿ ಚಿನ್ಮಯಾನಂದರೇ ಪ್ರತ್ಯಕ್ಷವಾಗಿ ತಮ್ಮ ಮುಂದೆ ನಿಂತು ಮಾತನಾಡುತ್ತಿರುವಂತೆ ಭಾಸವಾದ ಈ ಕ್ಷಣವು ತಮಗೆ ದಿವ್ಯ ಆಧ್ಯಾತ್ಮಿಕ ಅನುಭವ ನೀಡಿದೆ ಎಂದು ಪ್ರಧಾನಿ ಸಂತಸ ಹಂಚಿಕೊಂಡಿದ್ದಾರೆ.


1993ರ ವಡೋದರಾ ಭೇಟಿ ಸ್ಮರಿಸಿದ 'ಹೊಲೊಬೋಟ್'

ಸಂವಾದದ ವೇಳೆ ಪ್ರಧಾನಿ ಮೋದಿ ಅವರು 1993ರಲ್ಲಿ ಸ್ವಾಮಿ ಚಿನ್ಮಯಾನಂದರನ್ನು ಭೇಟಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡು ದೇಶಸೇವೆಯ ಆಶೀರ್ವಾದ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೊಲೊಗ್ರಾಮ್ ಅವತಾರವು, 1993ರ ಫೆಬ್ರವರಿಯಲ್ಲಿ ವಡೋದರಾದಲ್ಲಿ ನಡೆದ ಭೇಟಿಯನ್ನು ತಟ್ಟನೆ ಉಲ್ಲೇಖಿಸಿತು.


ಚಿಕಾಗೋದ ವಿಶ್ವ ಧರ್ಮ ಸಂಸತ್ತಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮೋದಿ ಬಂದಿದ್ದನ್ನು ಸ್ಮರಿಸಿದ AI ಅವತಾರ, "1993ರಲ್ಲಿ ನಾನು ಭೇಟಿಯಾಗಿದ್ದ ವ್ಯಕ್ತಿ ಇಂದು ಭಾರತದ ಪ್ರಧಾನಮಂತ್ರಿಯಾಗಿರುವುದು ನನಗೆ ಅತ್ಯಂತ ಸಂತಸ ತಂದಿದೆ" ಎಂದು ಹಾರೈಸಿತು.


"ದೇಶದ ಅತ್ಯುನ್ನತ ಸ್ಥಾನದಲ್ಲಿರುವವನು ಒಂಟಿ, ಆದರೆ..."

ಮಾತುಕತೆಯ ಮಧ್ಯೆ ಸ್ವಾಮಿ ಚಿನ್ಮಯಾನಂದರ ಹೊಲೊಗ್ರಾಮ್ ಆಡಿದ ಮಾತುಗಳು ಸಭಿಕರ ಗಮನ ಸೆಳೆದವು. "ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿ ಯಾವಾಗಲೂ ಒಂಟಿಯಾಗಿರುತ್ತಾನೆ. ಆದರೆ ನರೇಂದ್ರ ಮೋದಿ, ಇಡೀ ಭಾರತ ದೇಶವೇ ನಿಮ್ಮೊಂದಿಗಿದೆ" ಎಂದು ಹುರಿದುಂಬಿಸಿತು.


ಅಲ್ಲದೆ, "ಇಂದು ಉಪವಾಸ ಎಂದು ಹೇಳದೇ ಶ್ರೀಖಂಡ್ ಪ್ರಸಾದವನ್ನು ಸ್ವೀಕರಿಸಿ" ಎಂದು ಆತ್ಮೀಯವಾಗಿ ತಿಳಿಸಿದಾಗ ಪ್ರಧಾನಿ ಮೋದಿ ಕಣ್ಣಂಚಿನಲ್ಲಿ ತೇವ ಮೂಡಿತು.


ಚಿನ್ಮಯ ಮಿಷನ್‌ಗೆ ಪ್ರಧಾನಿ ಕೃತಜ್ಞತೆ:

"ಚಿನ್ಮಯ ಮಿಷನ್ ಕೇವಲ ಒಂದು ಸಂಸ್ಥೆಯಲ್ಲ, ಅದೊಂದು ಚೈತನ್ಯದ ತತ್ವಜ್ಞಾನ. ಹೊಲೊಗ್ರಾಮ್ ಮೂಲಕ ಪೂಜ್ಯ ಗುರುದೇವ ಚಿನ್ಮಯಾನಂದರನ್ನು ಈ ರೂಪದಲ್ಲಿ ನೋಡಿ ಮಾತನಾಡಿದ್ದು, ನಾನು 33 ವರ್ಷಗಳ ಕಾಲ ಹಿಂದಕ್ಕೆ ಪ್ರಯಾಣಿಸಿದ ಅನುಭವ ನೀಡಿತು" ಎಂದು ಮೋದಿ ಭಾವುಕರಾಗಿ ನುಡಿದರು.


ಏನಿದು 'ಹೊಲೊಗ್ರಾಮ್' ತಂತ್ರಜ್ಞಾನ.?

ಈ ಕಾರ್ಯಕ್ರಮದಲ್ಲಿ ಜಾಗತಿಕ ಗಮನ ಸೆಳೆದ 'ಹೊಲೊಬೋಟ್' ತಂತ್ರಜ್ಞಾನವು ವ್ಯಕ್ತಿಯೊಬ್ಬರ ತೀಕ್ಷ್ಮವಾದ ತ್ರಿಪರಿಮಾಣ (3D) ಬಿಂಬವನ್ನು ಗಾಳಿಯಲ್ಲಿ ಸೃಷ್ಟಿಸುತ್ತದೆ. ವಿಶೇಷ ಕ್ಯಾಮೆರಾಗಳು, ಪ್ರೊಜೆಕ್ಷನ್ ಸಿಸ್ಟಮ್‌ಗಳು, ಪೂರ್ವಭಾವಿ ಧ್ವನಿ-ವೀಡಿಯೊ ದಾಖಲೆಗಳು ಹಾಗೂ ಕೃತಕ ಬುದ್ಧಿಮತ್ತೆಯನ್ನು (AI) ಸಂಯೋಜಿಸಿ ಈ ಹೊಲೊಬೋಟ್ ಸಿದ್ಧಪಡಿಸಲಾಗುತ್ತದೆ. ಇದು ನೈಜ ವ್ಯಕ್ತಿಯೇ ಎದುರು ನಿಂತು ಸಂಭಾಷಣೆ ನಡೆಸುತ್ತಿರುವ ತದ್ವತ್ ಅನುಭವವನ್ನು ನೀಡುತ್ತದೆ.

Share this story