Public Prime News

CLEAR VISION, TRUE MISSION

ಫಾರ್ಮ್‌ 6 ಮಾನ್ಯತೆ ಬಗ್ಗೆ ಇನ್ನೂ ತೀರ್ಪಿಲ್ಲ: ಚುನಾವಣಾ ಆಯೋಗದ ವಾದಕ್ಕೆ ಸುಪ್ರೀಂ ಸ್ಪಷ್ಟನೆ..!
politics

ಫಾರ್ಮ್‌ 6 ಮಾನ್ಯತೆ ಬಗ್ಗೆ ಇನ್ನೂ ತೀರ್ಪಿಲ್ಲ: ಚುನಾವಣಾ ಆಯೋಗದ ವಾದಕ್ಕೆ ಸುಪ್ರೀಂ ಸ್ಪಷ್ಟನೆ..!

Public Prime News

Public Prime News

Reported by Public Prime News

ನವದೆಹಲಿ: 

ಹೊಸ ಮತದಾರರ ನೋಂದಣಿಗಾಗಿ ಚುನಾವಣಾ ಆಯೋಗ (ECI) ಹೊರತಂದಿರುವ ಪರಿಷ್ಕೃತ ‘ಫಾರ್ಮ್ 6’ (Form 6) ಅರ್ಜಿಯ ಅನುಮೋದನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. 


"ನಾವು ಹೊಸ ಫಾರ್ಮ್ 6 ಅನ್ನು ಅನುಮೋದಿಸಿಯೂ ಇಲ್ಲ, ಹಾಗೆಯೇ ತಿರಸ್ಕರಿಸಿಯೂ ಇಲ್ಲ" ಎಂದು ಸುಪ್ರೀಂ ಕೋರ್ಟ್‌ನ ಪೀಠ ಸ್ಪಷ್ಟಪಡಿಸಿದ್ದು, ನ್ಯಾಯಾಲಯದ ಹಿಂದಿನ ಆದೇಶಗಳನ್ನು ತನಗೆ ಅನುಕೂಲಕರವಾಗಿ ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿದೆ.


‘ನಮ್ಮ ಮಾತನ್ನು ತಪ್ಪಾಗಿ ವ್ಯಾಖ್ಯಾನಿಸಬೇಡಿ’: ಸುಪ್ರೀಂ ಕೋರ್ಟ್ ಎಚ್ಚರಿಕೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ತ್ರಿಪೀಠವು ವಿಚಾರಣೆ ವೇಳೆ, "ಕೋರ್ಟ್ ಆದೇಶಗಳನ್ನು ಬೇಕಾಬಿಟ್ಟಿ ತಮಗೆ ಬೇಕಾದಂತೆ ಓದಿಕೊಳ್ಳುವುದನ್ನು ಅಥವಾ ನಮ್ಮ ಹೇಳಿಕೆಗಳನ್ನು ತಪ್ಪಾಗಿ ವ್ಯಾಖ್ಯಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ. 


ಪರಿಷ್ಕೃತ ಫಾರ್ಮ್ 6 ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಾಗಲಿ ಅಥವಾ ನ್ಯಾಯಾಂಗದ ಮೊಹರಾಗಲಿ (Judicial Endorsement) ಇದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸುವಂತಿಲ್ಲ" ಎಂದು ಕಠಿಣವಾಗಿ ಹೇಳಿದೆ.


ಪರಿಷ್ಕೃತ ಫಾರ್ಮ್ 6 ವಿವಾದವೇನು.? 

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಆಯೋಗವು ಹೊಸ ಮತದಾರರ ನೋಂದಣಿಗೆ ನೀಡಲಾಗುವ ಫಾರ್ಮ್ 6 ರಲ್ಲಿ ಕೆಲವು ಹೆಚ್ಚುವರಿ ಷರತ್ತುಗಳನ್ನು ಹಾಗೂ ಪೋಷಕರ ವಿವರಗಳ ಲಿಂಕ್ ಮಾಡುವ ಹೊಸ ಘೋಷಣೆಗಳನ್ನು ಸೇರ್ಪಡೆಗೊಳಿಸಿತ್ತು. 


ಈ ನಿಯಮಗಳನ್ನು ಸವಾಲು ಮಾಡಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಈ ಹಿಂದೆ ನೀಡಿದ್ದ ತೀರ್ಪನ್ನೇ ಆಯೋಗವು ತನ್ನ ಬೆಂಬಲಕ್ಕೆ ಬಳಸಿಕೊಳ್ಳಲು ಯತ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ "ಪರಿಷ್ಕೃತ ಫಾರ್ಮ್ 6 ಅನ್ನು ನಾವು ಇನ್ನೂ ಕೂಲಂಕಷವಾಗಿ ಪರಿಶೀಲಿಸಿಲ್ಲ" ಎಂದು ಹೇಳಿದೆ.


ಅಕ್ಟೋಬರ್ 27ಕ್ಕೆ ಅಂತಿಮ ವಿಚಾರಣೆ: 

ಪರಿಷ್ಕೃತ ಫಾರ್ಮ್ 6 ನ ಸಿಂಧುತ್ವ ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಅಕ್ಟೋಬರ್ 27 ರಂದು ಕೂಲಂಕಷವಾಗಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಸರಕ್ತವಾದ ಅರ್ಜಿ ಸಲ್ಲಿಕೆಯಾದಾಗ ನಿಯಮಾವಳಿಗಳ ಸಿಂಧುತ್ವವನ್ನು ಪರಿಶೀಲಿಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Share this story