ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾ ಗೌಡ, ತಮಗೆ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಸಹಕೈದಿಗಳಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಸಹಕೈದಿಗಳಿಂದ ತೊಂದರೆ ಆರೋಪ
ಪವಿತ್ರಾ ಗೌಡ ಪರ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿ, ಮಹಿಳಾ ಬ್ಯಾರಕ್‌ನಲ್ಲಿ 30ಕ್ಕೂ ಹೆಚ್ಚು ಕೈದಿಗಳೊಂದಿಗೆ ಇರಬೇಕಾದ ಪರಿಸ್ಥಿತಿಯಿದ್ದು, ಸಹಕೈದಿಗಳ ವರ್ತನೆಯಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ಸಹಕೈದಿಗಳು ರಾತ್ರಿ ವೇಳೆ ನಿದ್ದೆ ಮಾಡಲು ಬಿಡುವುದಿಲ್ಲ ಹಾಗೂ ತಮ್ಮ ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುತ್ತಾರೆ ಎಂಬ ಆರೋಪಗಳನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಸಮಸ್ಯೆಗಳಿಂದಾಗಿ ಬ್ಯಾರಕ್‌ನಲ್ಲಿ ವಾಸಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ತಮಗೆ ಅನುಕೂಲಕರವಾದ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಬೇಕು ಎಂದು ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಜೈಲಿಗೆ ಭೇಟಿ ನೀಡುವಂತೆ ಮನವಿ
ಬ್ಯಾರಕ್‌ನಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಧೀಶರೇ ಖುದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಬೇಕು ಎಂಬ ಮನವಿಯನ್ನೂ ಪವಿತ್ರಾ ಗೌಡ ಪರ ವಕೀಲರು ಸಲ್ಲಿಸಿದ್ದರು.
ಈ ಅರ್ಜಿಗೆ ಸಂಬಂಧಿಸಿದಂತೆ ಎರಡೂ ಕಡೆಯ ವಾದಗಳನ್ನು ಆಲಿಸಿದ್ದ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 23ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಇದೀಗ ಬ್ಯಾರಕ್ ಬದಲಾವಣೆಗೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿರುವುದಾಗಿ ವರದಿಯಾಗಿದೆ.


