Public Prime News

CLEAR VISION, TRUE MISSION

ಕೋಟ ಜಂಕ್ಷನ್‌ನಲ್ಲಿ ಭೀಕರ ರಸ್ತೆ ಅಪಘಾತ: ಹಿರಿಯ RSS ಮುಖಂಡ ಗುರುದಾಸ್ ಶೆಣೈ ಸ್ಥಳದಲ್ಲೇ ಮೃತ್ಯು..!
local-news

ಕೋಟ ಜಂಕ್ಷನ್‌ನಲ್ಲಿ ಭೀಕರ ರಸ್ತೆ ಅಪಘಾತ: ಹಿರಿಯ RSS ಮುಖಂಡ ಗುರುದಾಸ್ ಶೆಣೈ ಸ್ಥಳದಲ್ಲೇ ಮೃತ್ಯು..!

Public Prime News

Public Prime News

Reported by Public Prime News

ಕೋಟ/ಉಡುಪಿ:

ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖಂಡ ಗುರುದಾಸ್ ಶೆಣೈ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.


ಕೋಟ ಮಣೂರು ನಿವಾಸಿಯಾಗಿರುವ ಗುರುದಾಸ್ ಶೆಣೈ ಅವರು ಸೋಮವಾರ ಮುಂಜಾನೆ ಸೈಕಲ್‌ನಲ್ಲಿ ಕೋಟ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದರು.


  • ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಕಾರು ಅತಿವೇಗ ಹಾಗೂ ಅಜಾಗರೂಕತೆಯಿಂದ ಸೈಕಲ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶೆಣೈ ಅವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.


ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರು ಚಾಲಕ, ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ.


ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ 'ಜೀವನ್ ಮಿತ್ರ' ನಾಗರಾಜ್ ಪುತ್ರನ್ ಅವರು ಗಾಯಾಳು ಪ್ರದೀಪ್ ಕಾಂಚನ್ ಅವರನ್ನು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸಕಾಲಿಕ ನೆರವು ನೀಡಿದ್ದಾರೆ.


ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share this story