Public Prime News

CLEAR VISION, TRUE MISSION

ಮಣಿಪಾಲದಲ್ಲಿ ರೌಡಿ ಗ್ಯಾಂಗ್‌ಗಳ ನಡುವೆ ದಾಳಿಗೆ ಸಂಚು: ಮಾರಕಾಸ್ತ್ರಗಳೊಂದಿಗೆ ಕುಖ್ಯಾತ ಆರೋಪಿ ಬಂಧನ..!
crime

ಮಣಿಪಾಲದಲ್ಲಿ ರೌಡಿ ಗ್ಯಾಂಗ್‌ಗಳ ನಡುವೆ ದಾಳಿಗೆ ಸಂಚು: ಮಾರಕಾಸ್ತ್ರಗಳೊಂದಿಗೆ ಕುಖ್ಯಾತ ಆರೋಪಿ ಬಂಧನ..!

Public Prime News

Public Prime News

Reported by Public Prime News

ಉಡುಪಿ: 

ಮಣಿಪಾಲದಲ್ಲಿ ರೌಡಿ ಗ್ಯಾಂಗ್‌ಗಳ ನಡುವಿನ ಮಾರಾಮಾರಿ ತಪ್ಪಿದ್ದು, ಮಾರಣಾಂತಿಕ ಆಯುಧಗಳೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.


ಕಿನ್ನಿಮುಲ್ಕಿಯ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್ (26) ಬಂಧಿತ ಆರೋಪಿ.


ಘಟನೆಯ ವಿವರ

ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳೊಂದಿಗೆ ಸುಳಿದಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.


ಬಂಧಿತನಿಂದ 20 ಇಂಚು ಉದ್ದದ ಬ್ಲೂ ಹ್ಯಾಂಡಲ್ ಇರುವ ಕಬ್ಬಿಣದ ಲಾಂಗ್ ಹಾಗೂ 16 ಇಂಚು ಉದ್ದದ ಗ್ರೀನ್ ಹ್ಯಾಂಡಲ್ ಇರುವ ಕಬ್ಬಿಣದ ಚಾಕುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಮೇಲಿನ ದಾಳಿಗೆ ಪ್ಲಾನ್

ಬಂಧಿತ ಮಹಮ್ಮದ್ ಪರ್ವೇಜ್ ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದು, ಆತನ ವಿರುದ್ಧ ಉಡುಪಿ ನಗರ, ಶಿರ್ವ, ಸೆನ್ (CEN) ಹಾಗೂ ಮಂಗಳೂರಿನ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು (MDMA/ಡ್ರಗ್ಸ್) ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.


ಪೊಲೀಸ್ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯವನ್ನು ಒಪ್ಪಿಕೊಂಡಿರುವ ಆರೋಪಿ, "ನನಗೆ ದಾವೂದ್, ಇಸಾಕ್ ಹಾಗೂ ಗರುಡಾ ಗ್ಯಾಂಗ್‌ನ ಕೆಲವರೊಂದಿಗೆ ಹಳೆಯ ವೈಮನಸ್ಸಿದೆ. ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡುವ ಉದ್ದೇಶದಿಂದಲೇ ಈ ಮಾರಕಾಸ್ತ್ರಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೆ" ಎಂದು ಹೇಳಿಕೆ ನೀಡಿದ್ದಾನೆ.


ನ್ಯಾಯಾಂಗ ಬಂಧನ

ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಸಂಚು ರೂಪಿಸಿದ್ದಕ್ಕಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.


Share this story