ಬೆಂಗಳೂರು:
ರಾಜ್ಯ ಸರ್ಕಾರದ ನೌಕರರು ತಾವು ನಿಯೋಜಿತವಾಗಿರುವ ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಿರುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕಣ್ಣಾವಲು ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಇದರ ಮೊದಲ ಹಂತವಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರಿಗೆ 'ಕರ್ತವ್ಯ' ಮೊಬೈಲ್ ಆ್ಯಪ್ ಮೂಲಕ ರಾತ್ರಿ ವೇಳೆ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ.
ಉಪಲೋಕಾಯುಕ್ತರ ಚಾಟಿ & ಸರ್ಕಾರದ ಕಠಿಣ ಕ್ರಮ
ಹಲವು ಸರ್ಕಾರಿ ಅಧಿಕಾರಿಗಳು ಮತ್ತು ವೈದ್ಯರು ನಿಯಮಾನುಸಾರ ತಮ್ಮ ಕೇಂದ್ರ ಸ್ಥಾನದಲ್ಲಿ ನೆಲೆಸದೆ, ದೂರದ ಊರುಗಳಿಂದ ಪ್ರತಿದಿನ ಓಡಾಟ ನಡೆಸುತ್ತಿರುವುದು ಉಪಲೋಕಾಯುಕ್ತರ ವಿಚಾರಣೆ ವೇಳೆ ಗಂಭೀರವಾಗಿ ಬೆಳಕಿಗೆ ಬಂದಿತ್ತು. ಇದರಿಂದಾಗಿ ಗ್ರಾಮೀಣ ಭಾಗದ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ತೀವ್ರ ವ್ಯತ್ಯಯ ಉಂಟಾಗುತ್ತಿತ್ತು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತರು, ನೌಕರರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ವಾಸವಿರುವುದನ್ನು ಖಾತರಿಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಹೊಸ ತಂತ್ರಜ್ಞಾನ ನಿಯಮ ಜಾರಿಗೆ ತರಲಾಗಿದೆ.
ನವೆಂಬರ್ 1ರಿಂದ 'ಕರ್ತವ್ಯ' ಆ್ಯಪ್ ಕಡ್ಡಾಯ
ಹೊಸ ಆದೇಶದ ಪ್ರಕಾರ, ಪ್ರಸಕ್ತ ವರ್ಷದ ನವೆಂಬರ್ 1ರಿಂದ ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಪ್ರತಿದಿನ ರಾತ್ರಿ 9 ಗಂಟೆಯ ನಂತರ 'ಕರ್ತವ್ಯ' ಮೊಬೈಲ್ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕಾಗುತ್ತದೆ.
ಈ ಆ್ಯಪ್‌ನಲ್ಲಿ ಆಯಾ ವೈದ್ಯರ ಕೇಂದ್ರ ಸ್ಥಾನದ ಭೌಗೋಳಿಕ ವ್ಯಾಪ್ತಿಯನ್ನು (ಅಕ್ಷಾಂಶ-ರೇಖಾಂಶ / Latitude-Longitude) ಜಿಯೋ ಫೆನ್ಸಿಂಗ್ ಮೂಲಕ ನಿಗದಿಪಡಿಸಲಾಗಿದೆ. ವೈದ್ಯರು ಆ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯೊಳಗೆ ಇದ್ದರೆ ಮಾತ್ರ ಹಾಜರಾತಿ ದಾಖಲಾಗಲು ಸಾಧ್ಯವಿದೆ. ಕೇಂದ್ರ ಸ್ಥಾನ ಬಿಟ್ಟು ಬೇರೆಡೆ ಇರುವವರು ಆ್ಯಪ್ ಮೂಲಕ ಹಾಜರಾತಿ ದಾಖಲಿಸಲು ಸಾಧ್ಯವಿಲ್ಲ.
ವಿನಾಯಿತಿ ಯಾರಿಗೆ? ತಪ್ಪಿದರೆ ಕಠಿಣ ಶಿಸ್ತುಕ್ರಮ
ವೈದ್ಯರು ಅಧಿಕೃತ ರಜೆಯಲ್ಲಿದ್ದಾಗ,ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅಥವಾ ಪೂರ್ವಾನುಮತಿ ಪಡೆದು ಅಧಿಕೃತವಾಗಿ ಕೇಂದ್ರ ಸ್ಥಾನ ಬಿಟ್ಟಿದ್ದ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗುತ್ತದೆ.
ಆದರೆ ಈ ಎಲ್ಲ ವಿವರಗಳನ್ನು ಕಡ್ಡಾಯವಾಗಿ ಆ್ಯಪ್‌ನಲ್ಲಿ ನಮೂದಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿ ತಿಂಗಳು ಈ ಆ್ಯಪ್ ಹಾಜರಾತಿ ವರದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದ್ದಾರೆ. ನಿಯಮ ಉಲ್ಲಂಘಿಸಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡದ ವೈದ್ಯರ ವಿರುದ್ಧ ಮುನ್ಸೂಚನೆ ಇಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಮುಂದಿನ ದಿನಗಳಲ್ಲಿ ಇಲಾಖೆಗಳಿಗೂ ವಿಸ್ತರಣೆ
ಆರೋಗ್ಯ ಇಲಾಖೆಯಲ್ಲಿ ಜಾರಿಗೆ ಬರುವ ಈ ಪ್ರಾಯೋಗಿಕ ವ್ಯವಸ್ಥೆಯ ಫಲಿತಾಂಶವನ್ನು ಆಧರಿಸಿ, ಮುಂದಿನ ಹಂತದಲ್ಲಿ ರಾಜ್ಯದ ಇತರೆ ಎಲ್ಲಾ ಪ್ರಮುಖ ಸರ್ಕಾರಿ ಇಲಾಖೆಗಳ ನೌಕರರಿಗೂ ಈ 'ಕರ್ತವ್ಯ' ಕಣ್ಣಾವಲು ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


