Public Prime News

CLEAR VISION, TRUE MISSION

137 ಕ್ಯಾನ್ಸರ್‌ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರದ ಕ್ರಮ: ನವೆಂಬರ್‌ 9ರಿಂದ ಹೊಸ ದರ ಜಾರಿ
health

137 ಕ್ಯಾನ್ಸರ್‌ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರದ ಕ್ರಮ: ನವೆಂಬರ್‌ 9ರಿಂದ ಹೊಸ ದರ ಜಾರಿ

Public Prime News

Public Prime News

Reported by Public Prime News

ನವದೆಹಲಿ: 

ಕ್ಯಾನ್ಸರ್ ಪೀಡಿತರಿಗೆ ಮತ್ತು ಅವರ ಕುಟುಂಬದವರಿಗೆ ಕೇಂದ್ರ ಸರ್ಕಾರವು ಅತ್ಯಂತ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡುವ ಮಹತ್ವದ ಹೆಜ್ಜೆಯನ್ನಿಟ್ಟಿದೆ. 


ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಒಟ್ಟು 137 ಕ್ಯಾನ್ಸರ್ ವಿರೋಧಿ ಔಷಧಿಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಶೇಕಡಾ 30ಕ್ಕೆ ಮಿತಿಗೊಳಿಸಿದ್ದು, ಇದರ ನೇರ ಪ್ರಭಾವದಿಂದ ಈ ಜೀವ ರಕ್ಷಕ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಶೇಕಡಾ 70ರವರೆಗೆ ಭಾರಿ ಕಡಿತವಾಗುವ ನಿರೀಕ್ಷೆಯಿದೆ. ಈ ಪರಿಷ್ಕೃತ ನೂತನ ಬೆಲೆಗಳು ಮುಂಬರುವ ನವೆಂಬರ್ 9ರಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿವೆ.


ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರು ಔಷಧ ಮಾರುಕಟ್ಟೆಯಲ್ಲಿ ಪಡೆಯುತ್ತಿದ್ದ ವಿಪರೀತ ಲಾಭಾಂಶಕ್ಕೆ ಕಡಿವಾಣ ಹಾಕಿ, ದುಬಾರಿ ಕ್ಯಾನ್ಸರ್ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡುವ ಸದುದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.


  • ಬೆಲೆ ಇಳಿಕೆ ಯಾವಾಗಲಿಂದ.?: 

  • ಪರಿಷ್ಕೃತ ನೂತನ ದರಗಳು ನವೆಂಬರ್ 9ರಿಂದ ದೇಶಾದ್ಯಂತ ಕಡ್ಡಾಯವಾಗಿ ಅನ್ವಯವಾಗಲಿವೆ.


  • ಪ್ರಮುಖ ಔಷಧಿಗಳು ಯಾವುವು.?:

  • ಸ್ತನ, ಪ್ರಾಸ್ಟೇಟ್, ಕೊಲೊನ್, ಅಂಡಾಣು ಹಾಗೂ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ 20ಕ್ಕೂ ಹೆಚ್ಚು ವಿಧದ ಕ್ಯಾನ್ಸರ್‌ಗಳಿಗೆ ಬಳಸುವ ಇಮ್ಯೂನೋಥೆರಪಿ ಔಷಧಗಳು, ಡೆನೋಸುಮಾಬ್, ಪೆಗ್‌ಫಿಲ್‌ಗ್ರಾಸ್ಟಿಮ್, ಬೆವಾಸಿಜುಮಾಬ್, ಪೆಂಬೊಲಿಜುಮಾಬ್, ಡರ್ವಾಲುಮಾಬ್ ಮತ್ತು ಒಸಿಮೆರ್ಟಿನಿಬ್ ಮುಂತಾದ ಜನಪ್ರಿಯ ಔಷಧಿಗಳು ಈ ಪಟ್ಟಿಯಲ್ಲಿವೆ.


  • ಬೆಲೆ ಪರಿಶೀಲನೆ ಎಲ್ಲಿ.?: 

  • ರೋಗಿಗಳು ಔಷಧಿಗಳ ಹೊಸ ದರಗಳನ್ನು ಸುಲಭವಾಗಿ ತಿಳಿದುಕೊಳ್ಳಲು 'ಫಾರ್ಮಾ ಸಹಿ ದಾಮ್' (Pharma Sahi Daam) ಮೊಬೈಲ್ ಆ್ಯಪ್ ಹಾಗೂ ಎನ್‌ಪಿಪಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿರಲಿದೆ.


ಬೆಲೆ ನಿಯಂತ್ರಣ ಕಾರ್ಯನಿರ್ವಹಣೆ ಮತ್ತು ಕಟ್ಟುನಿಟ್ಟಿನ ನಿಗಾ

ಔಷಧ ಬೆಲೆಗಳ ನಿಯಂತ್ರಣ ಆದೇಶದ ಅಡಿಯಲ್ಲಿ ಎನ್‌ಪಿಪಿಎ 'TMR' ತತ್ವವನ್ನು ಅನ್ವಯಿಸಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ. 2019ರಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದ ಯೋಜನೆಯ ಮುಂದುವರಿದ ಭಾಗವಾಗಿ ಈಗ ಹೆಚ್ಚಿನ ಔಷಧಿಗಳಿಗೆ ಈ ನಿಯಮವನ್ನು ವಿಸ್ತರಿಸಲಾಗಿದೆ.


  • ಕಂಪನಿಗಳಿಗೆ ಕಠಿಣ ಸೂಚನೆ: 

  • ಔಷಧ ತಯಾರಿಕಾ ಕಂಪನಿಗಳು ಗೆಜೆಟ್ ಅಧಿಸೂಚನೆ ಹೊರಬಂದ 7 ದಿನಗಳ ಒಳಗಾಗಿ ಪರಿಷ್ಕೃತ ಬೆಲೆಗಳ ವಿವರವನ್ನು ಎನ್‌ಪಿಪಿಎಗೆ ತಿಳಿಸಬೇಕು. ಜತೆಗೆ, ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಬೆಲೆ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯ.


  • ಕೃತಕ ಅಭಾವಕ್ಕೆ ತಡೆ: 

  • ಮಾರುಕಟ್ಟೆಯಲ್ಲಿ ಔಷಧಿಗಳ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಕಂಪನಿಗಳು ತಮ್ಮ ಹಾಲಿ ಉತ್ಪಾದನೆ ಹಾಗೂ ಪೂರೈಕೆ ಮಟ್ಟವನ್ನು ಕಾಯ್ದುಕೊಳ್ಳಬೇಕು. ಉತ್ಪಾದನೆ ತಗ್ಗಿಸಲು ಸರ್ಕಾರದ ಮುಂಚಿತ ಅನುಮತಿ ಕಡ್ಡಾಯವಾಗಿದೆ.


  • ಆಸ್ಪತ್ರೆಗಳ ಜವಾಬ್ದಾರಿ: 

  • ಎಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ತಾವು ಪೂರೈಸುವ ಔಷಧಗಳ ಪರಿಷ್ಕೃತ ಬೆಲೆಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಮತ್ತು ಮಳಿಗೆಗಳಲ್ಲಿ ಬೆಲೆ ಪಟ್ಟಿಯನ್ನು ಪ್ರದರ್ಶಿಸಬೇಕು.


ರಾಜ್ಯ ಔಷಧ ನಿಯಂತ್ರಕರು ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ನಿರಂತರವಾಗಿ ಗಮನಿಸಲಿದ್ದಾರೆ. 


ಈ ದೂರದೃಷ್ಟಿಯ ಕಲ್ಯಾಣಕಾರಿ ಕ್ರಮಗಳ ಮೂಲಕ ಕ್ಯಾನ್ಸ‌ರ್ ರೋಗಿಗಳು ಹಾಗೂ ಅವರ ಕುಟುಂಬಗಳ ಮೇಲಿನ ಆರ್ಥಿಕ ಹೊಣೆಯನ್ನು ಗಣನೀಯವಾಗಿ ತಗ್ಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

Share this story