Public Prime News

CLEAR VISION, TRUE MISSION

ಉಡುಪಿ: ಅಜ್ಜರಕಾಡು ನೂತನ ಜಿಲ್ಲಾ ಆಸ್ಪತ್ರೆ ಆರಂಭಕ್ಕೆ ನವೆಂಬರ್ 5ರ ಡೆಡ್‌ಲೈನ್: ಹಳೆಯ ಪರಿಕರ ಸ್ಥಳಾಂತರಿಸಿದರೆ ಕರವೇ ಉಗ್ರ ಹೋರಾಟ ಎಚ್ಚರಿಕೆ..!
health

ಉಡುಪಿ: ಅಜ್ಜರಕಾಡು ನೂತನ ಜಿಲ್ಲಾ ಆಸ್ಪತ್ರೆ ಆರಂಭಕ್ಕೆ ನವೆಂಬರ್ 5ರ ಡೆಡ್‌ಲೈನ್: ಹಳೆಯ ಪರಿಕರ ಸ್ಥಳಾಂತರಿಸಿದರೆ ಕರವೇ ಉಗ್ರ ಹೋರಾಟ ಎಚ್ಚರಿಕೆ..!

Public Prime News

Public Prime News

Reported by Public Prime News

ಉಡುಪಿ: 

ಉಡುಪಿಯ ಅಜ್ಜರಕಾಡಿನ ನೂತನ ಜಿಲ್ಲಾ ಆಸ್ಪತ್ರೆಯನ್ನು ಎಲ್ಲಾ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೊಂದಿಗೆ ತಕ್ಷಣವೇ ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.


ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ನಡೆಸಿದ ನಿರಂತರ ಹೋರಾಟದ ಫಲವಾಗಿ ಜಿಲ್ಲಾಡಳಿತವು ನವೆಂಬರ್ 5ರೊಳಗೆ ಆಸ್ಪತ್ರೆ ಆರಂಭಿಸುವುದಾಗಿ ಭರವಸೆ ನೀಡಿದೆ ಎಂದರು. 


ಆದರೆ, ತರಾತುರಿಯಲ್ಲಿ ಆಸ್ಪತ್ರೆ ಆರಂಭಿಸುವ ಭರದಲ್ಲಿ ಹಳೆಯ ಜಿಲ್ಲಾಸ್ಪತ್ರೆಯ ಹಳೆಯ ಪರಿಕರಗಳನ್ನೇ ನೂತನ ಕಟ್ಟಡಕ್ಕೆ ತಂದು ಅಳವಡಿಸುತ್ತಿರುವ ಕೆಲಸ ನಡೆಯುತ್ತಿದ್ದು, ಇದು ಸಂಘಟನೆಯ ಬೇಡಿಕೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸುಸಜ್ಜಿತ ಸೌಲಭ್ಯಗಳಿಲ್ಲದೆ ಆಸ್ಪತ್ರೆ ಆರಂಭಿಸಿದರೆ ಬಿಡುವುದಿಲ್ಲ

ನೂತನ ಜಿಲ್ಲಾಸ್ಪತ್ರೆಯು ಕೇವಲ ಕಟ್ಟಡಕ್ಕೆ ಸೀಮಿತವಾಗಬಾರದು, ಬದಲಿಗೆ ಅತ್ಯಾಧುನಿಕ ಹಾಗೂ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸಜ್ಜುಗೊಂಡು ರೋಗಿಗಳಿಗೆ ಸೇವೆ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ. 


ಕೇವಲ ಹಳೆಯ ಪರಿಕರಗಳನ್ನು ಸ್ಥಳಾಂತರಿಸಿ ಆಸ್ಪತ್ರೆ ಉದ್ಘಾಟಿಸಿದರೆ ಬಡ ರೋಗಿಗಳಿಗೆ ಯಾವುದೇ ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.


ಜಿಲ್ಲಾಡಳಿತಕ್ಕೆ ಕರವೇ ಖಡಕ್ ವಾರ್ನಿಂಗ್

ಬಡ ರೋಗಿಗಳ ಆರೋಗ್ಯದ ಗಂಭೀರ ವಿಚಾರದಲ್ಲಿ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ಮುಂದುವರಿಸಿದರೆ, ಈಗಾಗಲೇ ಎಚ್ಚರಿಸಿದಂತೆ ಸಂಘಟನೆಯ ವತಿಯಿಂದ ಉಡುಪಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರವೀಣ್ ಶೆಟ್ಟಿ ನೇರ ಎಚ್ಚರಿಕೆ ನೀಡಿದ್ದಾರೆ. ನಿಗದಿತ ಗಡುವಿನೊಳಗೆ (ನವೆಂಬರ್ 5) ಪೂರ್ಣಪ್ರಮಾಣದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.


ಸುದ್ದಿಗೋಷ್ಠಿಯಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಅನ್ಸರ್ ಅಹಮದ್ ಹಾಗೂ ಇತರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this story